ಚಿನಕುರಳಿ – ೦೮
– ಮರ್ಕಟ
`ನಾನು ಮುಟ್ಟಿದರೆ ನೀವು ಭಸ್ಮವಾಗಿ ಬಿಡುತ್ತೀರಿ’ – ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲರಿಗೆ.
ಆಧುನಿಕ ಭಸ್ಮಾಸುರ? ಹೆಗಡೆಯವರನ್ನು ವೀರಪ್ಪನ್ ತಲೆ ಮೇಲೆ ಕೈ ಇಡಲು ಕಳುಹಿಸುವುದೊಳಿತು.
`ನಾನು ಅಡ್ಡಪಂಚೆ ಉಡುವವನಾದ ಕಾರಣ ದೂರದರ್ಶನ ಕೇಂದ್ರಗಳು ನನ್ನನ್ನು ದೂರವಿಟ್ಟಿವೆ’ -ದೇವೇಗೌಡರ ಅಳಲು.
ಗೌಡರಿಗೆ ರೇಮಂಡ್ ಸೂಟಿಂಗ್ ಬಟ್ಟೆ ಕಳುಹಿಸೋಣವೇ?
ಶಿವಮೊಗ್ಗದಲ್ಲಿ ಬಂಗಾರಪ್ಪ ಸೋಲು.
ಬಂಗಾರಪ್ಪನವರು ಭದ್ರಾವತಿ ಬಂಗಾರ ಎಂದು ಜನರ ತೀರ್ಮಾನ.
ಕ.ರಾ.ರ. ಸಾರಿಗೆ ಸಂಸ್ಥೆಯವರು ವಿದೇಶೀ ಪ್ರವಾಸಿಗರಿಗೆ ಪಂಚತಾರಾ ಸೌಲಭ್ಯ ಕಲ್ಪಿಸಲಿದ್ದಾರೆ.
ಹಾಗೆಯೇ ಸ್ವದೇಶೀ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟರೆ ಚೆನ್ನಾಗಿತ್ತು.
ಮೈಕ್ರೋಸಾಫ್ಟ್ ಕಂಪೆನಿಯವರು ಹೊರತರಲಿರುವ ವಿಂಡೋಸ್-೯೮ ತಂತ್ರಾಂಶದಲ್ಲಿ ಹಿಂದಿ, ಗುಜರಾತಿ ಮತ್ತು ತಮಿಳು ಭಾಷೆಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ಭಾರತೀಯ ಭಾಷೆಗಳೆಂದರೆ ಕೇವಲ ಹಿಂದಿ, ಗುಜರಾತಿ ಮತ್ತು ತಮಿಳು ಮಾತ್ರ ಎಂದು ಅವರಿಗೆ ಯಾರು ಹೇಳಿದರೆಂದು ಗೊತ್ತಾಗಿಲ್ಲ. ಮೈಕ್ರೋಸಾಫ್ಟ್ ಕಂಪೆನಿಯ ಪ್ರಮುಖ ಹುದ್ದೆಗಳಲ್ಲಿರುವ ಕನ್ನಡಿಗರು ಎಂದಿನಂತೆ ಕುಂಭಕರ್ಣ ನಿದ್ದೆಯಲ್ಲಿದ್ದಾರೆ.
ಚಂದ್ರಗ್ರಹದಲ್ಲಿ ನೀರು ಇರುವುದು ಪತ್ತೆಯಾಗಿದೆ.
ಬೆಂಗಳೂರು ಜಲಮಂಡಳಿಗೆ ಗೊತ್ತಾದರೆ ಅದನ್ನೂ ಕುಲಗೆಡಿಸಿ ಬಿಟ್ಟಾರು.
(೧೯೯೮)