ಚಿನಕುರಳಿ – ೦೬
– ಮರ್ಕಟ
ಸ್ವಾತಂತ್ರೊ ತ್ಸವದ ೫೦ನೆಯ ವರ್ಧಂತಿ.
೫೦ ವರ್ಷಗಳ ಅನಂತರವೂ ಪರಿಸ್ಥಿತಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಅಂದೂ ನಮ್ಮ ನಾಯಕರು ಕಾರಾಗೃಹದಲ್ಲಿದ್ದರು. ಇಂದೂ ನಮ್ಮ ಕೆಲವು ನಾಯಕರು ಕಾರಾಗೃಹದಲ್ಲಿದ್ದಾರೆ.
ಜಗತ್ತಿನ ಅತಿ ದುಬಾರಿ ನಗರಗಳ ಯಾದಿಯಲ್ಲಿ ಬೆಂಗಳೂರಿಗೆ ೧೪೩ನೆಯ ಸ್ಥಾನ.
ಮೊದಲನೆಯ ಸ್ಥಾನ ಪಡೆಯಲು ಕಂಕಣಬದ್ಧರಾಗಿ ದುಡಿಯುತ್ತಿದ್ದೇವೆ ಎಂದು ಬೆಂಗಳೂರಿನ ನಗರಪಿತರು ಹೇಳಿದ್ದು ಕೇಳಿಬಂದಿಲ್ಲ.
ಖ್ಯಾತ ದಂತಚೋರ, ನರಹಂತಕ ವೀರಪ್ಪನ್‌ನ ಶರಣಾಗತಿಯ ಬೇಡಿಕೆಗೆ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಒಪ್ಪಿವೆ.
ಶರಣಾಗತರಾಗಿರುವುದು ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಎಂದು ಕುಹಕಿಗಳು ಹೇಳುತ್ತಿದ್ದಾರೆ.
ಲಾಲೂ ಯಾದವ್ ಮತ್ತು ಶರದ್ ಯಾದವ್ ಹಣಾಹಣಿ -ಸುದ್ದಿ.
ಭಾರತದಲ್ಲಿ ಮತ್ತೊಮ್ಮೆ ಯಾದವೀ ಕಲಹ.
ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯದ ಹೆಚ್ಚಳದಿಂದಾಗಿ ಪುರುಷರಲ್ಲಿ ವೀರ್ಯಶಕ್ತಿ ಕುಂದುತ್ತಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಕುಟುಂಬ ಯೋಜನೆಗೆ ಈ ರೀತಿಯಲ್ಲಾದರೂ ಪ್ರಯತ್ನಿಸುತ್ತಿದ್ದೇವೆ ಎಂದು ನಗರಪಿತರು ಇನ್ನೂ ಹೇಳಿಲ್ಲ.
(೧೯೯೭)