ಚಿನಕುರಳಿ-೦೪
ಮರ್ಕಟ
ಬೆಂಗಳೂರು ನಗರ ಸಾರಿಗೆ ಬಸ್ಸುಗಳು ಸಮಯ ಪರಿಪಾಲನೆ ಮಾಡಲು ೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಂಪ್ಯೂಟರೀಕೃತ ವಿಧಾನವನ್ನು ಅಳವಡಿಸಲಾಗುವುದು ಎಂದು ಸಾರಿಗೆ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ.
ಇನ್ನು ಮುಂದೆ ಬಸ್ಸುಗಳು ಸಮಯ ಪರಿಪಾಲನೆ ಮಾಡಬಹುದು ಎಂಬ ಆಸೆ ಇಟ್ಟುಕೊಳ್ಳಬೇಕಾಗಿಲ್ಲ. ಎಷ್ಟು ಬಸ್ಸುಗಳು ಸಮಯ ಪರಿಪಾಲನೆ ಮಾಡುತ್ತಿಲ್ಲ ಮತ್ತು ಇದರಿಂದ ಸಾರಿಗೆ ಸಂಸ್ಥೆಗೆ ಎಷ್ಟು ನಷ್ಟ ಆಗುತ್ತಿದೆ ಎಂಬ ಲೆಕ್ಕ ಕರಾರುವಾಕ್ಕಾಗಿ ಸಿಗಬಹುದು.
ಏಪ್ರಿಲ್ ೧೮ ರಿಂದ ಆಂಧ್ರ ಪ್ರದೇಶದಲ್ಲಿ ಪಾನ ನಿಷೇಧವನ್ನು ರದ್ದು ಮಾಡಲಾಗಿದೆ.
ಇನ್ನು ಮುಂದೆ ಕದ್ದು ಮುಚ್ಚಿ ಕುಡಿಯಬೇಕಾಗಿಲ್ಲ; ರಾಜಾರೋಷವಾಗಿ ಕುಡಿಯಬಹುದು.
`ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ . ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ….’
ಈ ಹಳೆಯ ಚಿತ್ರಗೀತೆಯನ್ನು ಈಗ ಮತ್ತೊಮ್ಮೆ ಜ್ಞಾಪಿಸಿಕೊಳ್ಳಲು ಕಾರಣವೇನು ಎಂದು ಹೇಳಿದವರಿಗೆ ಯಾವುದೇ ಬಹುಮಾನ ನೀಡಲಾಗುವುದಿಲ್ಲ.
`ಇಂಡಿಯನ್ ಏರ್‌ಲೈನ್ಸ್ ವಿಮಾನಗಳು ರದ್ದಾಗುವುದು ಬಲು ಸಹಜ. ಬೇರೆ ನಗರಗಳಿಗೆ ಪ್ರವಾಸ ಹೋಗುವಾಗ ನನ್ನ ಜೊತೆ ಕಾಗದ ಪೆನ್ನು ತೆಗೆದುಕೊಂಡು ಹೋಗುತ್ತೇನೆ. ವಿಮಾನ ರದ್ದಾದಾಗ ಹೋಟೆಲಿನಲ್ಲಿ ಕುಳಿತು ವೈಜ್ಞಾನಿಕ ಲೇಖನ, ಕಥೆ ಬರೆಯುತ್ತೇನೆ’ – ಹೀಗೆಂದವರು ಡಾ| ಜಯಂತ ನಾರ್‍ಳೀಕರ್, `ನಿಮಗೆ ಲೇಖನ, ಕಥೆ ಬರೆಯಲು ಸಮಯ ಹೇಗೆ ದೊರೆಯುತ್ತದೆ’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ.
ಇನ್ನು ಮುಂದೆ ಇಂಡಿಯನ್ ಏರ್‌ಲೈನ್ಸ್ ಟಿಕೇಟಿನ ಜೊತೆ ಒಂದು ಪ್ಯಾಡ್ ಮತ್ತು ಪೆನ್ನು ಉಚಿತ ಕೊಡುವುದು ಒಳ್ಳೆಯದು. ದೇಶದಲ್ಲಿ ತೀವ್ರವಾಗಿರುವ ಉತ್ತಮ ಲೇಖಕರ ಕೊರತೆ ಇದರಿಂದ ನೀಗಬಹುದೇನೊ?
ದೆಹಲಿಯಲ್ಲಿರುವ ಹಳೆಯ ಪುಸ್ತಕಗಳ ಮಾರುಕಟ್ಟೆಗೆ ಇತ್ತೀಚಿಗೆ ಸೇರ್ಪಡೆಯಾಗಿರುವುದು ಏನೆಂದು ಗೊತ್ತೆ?
ಕನ್ನಡದ ಮೂಲಕ ಹಿಂದಿ ಕಲಿಯುವ ಪುಸ್ತಕಗಳು!
(೧೯೯೮)