ನಿರ್ಧಾರ

– ಗಿರೀಶ್ ಜಮದಗ್ನಿ

ಊರಿನ ಪ್ರಮುಖ ಬಡಾವಣೆ. ರಾತ್ರಿ ಸಮಯ ಹನ್ನೊಂದು ಘಂಟೆ. ಅಮಾವಾಸ್ಯೆಗೆ ಹತ್ತಿರದ ದಿನಗಳು. ನಕ್ಷತ್ರಗಳೂ ಕೂಡ ಮೋಡಗಳ ಹಿಂದೆ ಕಣ್ಮರೆಯಾಗಿದ್ದ ರಾತ್ರಿ. ಬೀದಿ ನಾಯಿಗಳೂ ಸಹ ಬೊಗೊಳೋದು ಬಿಟ್ಟು ಎಲ್ಲೋ ಓಡಿ ಹೋಗಿದ್ದವು. ಬೀದಿ ದೀಪದ ಕಂಬಗಳೂ ಕೂಡ ಎಂದಿನಂತೆ ಬೆಳಕು ನೀಡದೆ ಬೆತ್ತಲೆಯಾಗಿ ನಿಂತಿದ್ದವು. ಎಲ್ಲ ಕಡೆ ಕತ್ತಲೆ. ಊರಿನ ಬೀದಿಯಲ್ಲಿ, ಸ್ಮಶಾನ ಮೌನ.

ಬಡಾವಣೆಯ ಮನೆಗಳೆಲ್ಲಾ ಕತ್ತಲೆಯನ್ನು ಬಳಿದುಕೊಂಡು ನಿಂತಿದ್ದವು. ದಿನವೆಲ್ಲ ದಣಿದಿದ್ದ ಜನ ಕನಸುಗಳನ್ನಪ್ಪಿ ಮಲಗಿದ್ದರು. ಆದರೆ ಒಂದೇ ಒಂದು ಮನೆಯ ಬೆಡ್ ರೂಮಿನಲ್ಲಿ ದೀಪ ಬೆಳಗುತ್ತಿತ್ತು. ಗಂಡ ಹೆಂಡತಿಯ ಊಟವಾಗಿತ್ತು, ಆದರೆ ಮಲಗಿರಲಿಲ್ಲ. ದಂಪತಿಗಳು ಮಾತನಾಡುತ್ತಿದ್ದರು. ಮಾತೆಂದರೆ ಸರಸ-ಸಲ್ಲಾಪ ಅಲ್ಲ. ಪರಿಸ್ಥಿತಿ ತೀರ ಗಂಭೀರವಾಗಿತ್ತು. ಹೆಂಡತಿ ಗಂಡನ ಮೈಗಂಟಿ ಕುಳಿತಿರಲಿಲ್ಲ. ಶತಪಥ ತಿರುಗುತ್ತಿದ್ದಳು. ಗಂಡ ಅವಳನ್ನು ಸಮಾಧಾನ ಮಾಡುವ ಪ್ರಯತ್ನ ಮುಂದುವರಿಸಿದ್ದ.

ಓಡಾಡುತ್ತಿದ್ದವಳಿಗೆ ಸುಸ್ತಾಗಿತ್ತು. ಕಿಟಕಿಗೆ ಒರಗಿ, ಕಿಟಕಿಯಿಂದ ಹೊರಗಿದ್ದ ಕತ್ತಲೆಯನ್ನು ದಿಟ್ಟಿಸುತ್ತ ನಿಂತಳು. ಏದುಸಿರು ಮುಂದುವರಿದಿತ್ತು. ಎರಡು ನಿಮಿಶ ಮೌನದ ನಂತರ ಹಿಂದೆ ತಿರುಗದೆ ಹೇಳಿದಳು.” ನಾನು ಮಾಡಿರೋ ನಿರ್ಧಾರಾನೇ ಕಡೆ ನಿರ್ಧಾರ. ಇನ್ನು ನನ್ನ ನಿರ್ಧಾರ ಬದಲಿಸೋಕ್ಕೆ ಆಗೋಲ್ಲ.”

ಜಯವಂತ್ ಕೈ ಚೆಲ್ಲಿ ಕುಳಿತ.” ವಾಃಟ್ ಈಸ್ ರಾಂಗ್ ವಿತ್ ಯು, ಉಮಾ? ಪ್ಲೀಸ್, ಕೆಟ್ಟ ನಿರ್ಧಾರ ಮಾಡ್ಬೇಡ”.

ಕಿಟಕಿಯಿಂದ ಹೊರ ನೋಡುತ್ತಿದ್ದವಳು ಗಕ್ಕನೆ ಹಿಂದೆ ತಿರುಗಿ ಕಿರುಚಿದಳು.” ಯಾವುದು ಕೆಟ್ಟ ನಿರ್ಧಾರ? ಆ ಗೋಮುಖ ವ್ಯಾಘ್ರ ನಿರಂಜನ್-ನ ಸಾಯಿಸ್ಬೇಕು ಅಂಥ ಮಾಡಿರೋ ನಿರ್ಧಾರ ಕೆಟ್ಟದೇನು? ಅವ್ನು ಮಾಡಿರೋ ಕೆಲಸಕ್ಕೆ, ಸಾವೂ ಕೂಡ ಸಣ್ಣ ಶಿಕ್ಷೇನೇ.”

“ಕೂಲ್ ಡೌನ್ ಉಮಾ. ಇಲ್ಲೇ ನೀನು ತಪ್ಪು ಮಾಡ್ತಿರೋದು. ಅವನು ಕೆಟ್ಟ ಕೆಲಸ ಮಾಡಿದ ಅಂತ ಅವನನ್ನ ಸಾಯಿಸಿಬಿಡೊದೇ? ಅವನಿಗೆ ಒಳ್ಳೆಯವನಾಗೋಕ್ಕೆ ಚಾನ್ಸ್ ಕೊಡೋದಿಲ್ವಾ?”

ಉಮಾಳ ಸಿಟ್ಟು ಇನ್ನೂ ಜಾಸ್ತಿಯಾಯ್ತು.” ಈ ಗಂಡಸರೆಲ್ಲಾ ಒಂದೆ. ಇದೇ ಕೆಲಸ ಒಂದು ಹೆಣ್ಣು ಮಾಡಿದ್ರೆ, ಇದೇ ಮಾತು ಹೇಳ್ತಿದ್ರಾ? ಗಂಡು ಮಾಡೋದಿಕ್ಕೆಲ್ಲ ಎಕ್ಸ್ ಕೂಸ್ ಇದ್ದೇ ಇರುತ್ತೆ. ಛೆ.! ಐ ಹೇಟ್ ದಿಸ್ ಮೇಲ್ ಡಾಮಿನೇಟೆಡ್ ಸೊಸೈಟಿ”.

“ನಿನ್ನ ಮಾತು ಒಪ್ತೀನಿ. ನಮ್ಮ ಸಮಾಜದಲ್ಲಿ, ಗಂಡಿಗೊಂದು ಅಳತೆಗೋಲು, ಹೆಣ್ಣಿಗೊಂದು ಅಳತೆಗೋಲು. ನಾನು ಇದನ್ನ ಇಲ್ಲ ಅಂತಿಲ್ಲ. ಆದ್ರೆ ನೀನು , ನನ್ನನ್ನು ಕೂಡ ಆ ಗುಂಪಿಗೆ ಸೇರಿಸಬಾರ್ದಿತ್ತು. ಲುಕ್, ನಾನು ನಿನಗೆ ಸಹಾಯ ಮಾಡೋದಕ್ಕೆ ಪ್ರಯತ್ನ ಪಡ್ತಿದ್ದೆ.”

ಉಮಾ, ಜಯವಂತ್ ಹತ್ತಿರ ನಿಂತು ಕೇಳಿದಳು. ” ಹೌದಾ?, ಹಾಗಾದ್ರೆ, ನಿರಂಜನನ ಸಾಯಿಸೋದಿಕ್ಕೆ ನಿಮ್ಮದ್ಯಾಕೆ ಇಷ್ಟೊಂದು ವಿರೋಧ?”

“ನಿರಂಜನನ ಸಾಯಿಸೋದಿಕ್ಕೆ ಅಂಥ ಅಲ್ಲ ಉಮಾ. ಯಾರನ್ನೇ ಆಗಲಿ, ಎಷ್ಟೇ ಕ್ರೂರಿ ಆಗಿರಲೀ ಆ ವ್ಯಕ್ತಿ, ಸಾಯಿಸೋದು ತಪ್ಪು ಅಂತ ನನ್ನ ಅಭಿಪ್ರಾಯ. ಒಂದು ವ್ಯಕ್ತೀನ ಕೊಲೆ ಮಾಡೋದೇ ಮೊದಲನೆ ನಿರ್ಧಾರ ಆಗ್ಬಾರ್ದು “.

” ಓ ಹೊ..ಹಾಗಾದ್ರೆ, ನಿಮ್ಮ ಪ್ರಕಾರ, ಮೊದಲನೆ ನಿರ್ಧಾರ ಏನಾಗ್ಬೆಕೋ?” ಉಮಾಳ ಮಾತಿನಲ್ಲಿ ವ್ಯಂಗ್ಯವಿತ್ತು.

“ನೋಡು, ನಾನು ನೂರು ಸಾರಿ ಹೇಳಿದೀನಿ. ಗೀವ್ ಹಿಮ್ ಎ ಚಾನ್ಸ್. ಅವನಿಗೆ ಇನ್ನೊಂದು ಅವಕಾಶ ಕೊಡು. ಪ್ರತಿಯೊಬ್ಬನಿಗೂ ತನ್ನನ್ನು ತಾನೇ ಸರಿ ಮಾಡ್ಕೊಳ್ಳಕ್ಕೆ ಅವಕಾಶ ಬೇಕೇ ಬೇಕು”.

ಓಡಾಡುತ್ತಿದ್ದವಳಿಗೆ ಸುಸ್ತಾಗಿತ್ತು. ಮಂಚದ ಮೇಲೆ ದೊಪ್ಪನೆ ಕುಳಿತಳು. ತಲೆಯಲ್ಲಿ ದ್ವಂದ್ವದ ಅಲೆ ಎದ್ದಿತ್ತು.

” ನೋಡು ಉಮಾ, ನೀನು ಬೇಜಾರು ಮಾಡ್ಕೊಳ್ಳಲ್ಲ ಅಂದ್ರೆ, ಎರಡು ಮಾತು ಹೇಳ್ತೀನಿ”.

ಏನು? ಎನ್ನುವಂತೆ ಗಂಡನ ಕಡೆ ನೋಡಿದಳು, ಉಮಾ.

” ಉಮಾ, ನೀನು ತುಂಬಾ ಎಕ್ಸೈಟ್ ಆಗ್ತಿದೀಯ. ಪ್ಲೀಸ್ ಕಾಮ್ ಡೌನ್. ನಿನಗೂ ಏನು ಕಮ್ಮಿ ವಯಸ್ಸಲ್ಲ. ಅದರ ಮೇಲೆ ಬಿ.ಪಿ ಬೇರೆ. ನೋಡು, ಈಗ್ಲೂ ಹೇಳ್ತೀನಿ. ನೀನು ಬರಿದಿರೋ ಕತೆ, ತುಂಬಾ ಚೆನ್ನಾಗಿದೆ. ವಾಸ್ತವಕ್ಕೆ ಹತ್ತಿರವಾಗಿದೆ. ನಿರಂಜನ್ ನೀನೆ ಹುಟ್ಟು ಹಾಕಿರೋ ಒಂದು ಪಾತ್ರ. ಕತೇಲಿ ಬರೋ ಒಂದು ಕ್ಯಾರಕ್ಟರ್ ಬಗ್ಗೆ ಇಷ್ಟೊಂದು ಯೋಚನೆ ಮಾಡಿ, ನಿನ್ನ ಆರೋಗ್ಯ ಕೆಡಿಸ್ಕೋಬೇಡ. ನಿಜ ಹೇಳ್ತೀನಿ. ನೀನು ಬರಿದಿರೋ ಈ ಕತೆಗೆ, ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ, ಮೊದಲನೆ ಬಹುಮಾನ ಬರೋದು ಖಂಡಿತ”.

” ಹಾ…ಆಮೇಲೆ, ಇನ್ನೊಂದು ವಿಷಯ. ನೀನು ನಿನ್ನ ಸುತ್ತಲೂ ನಡೆಯೋ ದೈನಂದಿನ ಘಟನೆಗಳಿಗೆ ಚೆನ್ನಾಗಿ ಸ್ಪಂದಿಸ್ತಿಯ. ಈಗಿನ ಸಮಾಜದ ಪರಿಸ್ತಿತಿ ಬಗ್ಗೆ ನಿನಗೆ ತುಂಬಾ ಕಳ ಕಳಿ ಇದೆ. ಎಲ್ಲಾ ಸರಿ. ಆದ್ರೆ, ಒಬ್ಬ ಲೇಖಕಿ ಆಗಿ, ವಿದ್ಯಾವಂತೆಯಾಗಿ, ನೀನು ಕ್ರೌರ್ಯದ ಮಾರ್ಗ ಅನುಸರಿಸೋದು ತಪ್ಪು ಅಂತ ನನ್ನ ಭಾವನೆ. ಈಗಾಗ್ಲೇ, ನಮ್ಮ ಸಮಾಜ ದಿನಾ ನಡೆಯೋ ಹಿಂಸೆ, ಅತ್ಯಾಚಾರ, ಕೊಲೆಗಳಿಗೆ ತತ್ತರಿಸಿ ಹೋಗಿದೆ. ನಿನ್ನ ಕತೆಗಳಲ್ಲಿ ನೀನು ನಮ್ಮ ಮಧ್ಯೆ ನಡೀತಿರೋ ಅನ್ಯಾಯನ ಧಿಕ್ಕರಿಸು, ಆದ್ರೆ ಹಿಂಸೆಗೆ ಪ್ರಚಾರ ಕೊಟ್ಟು, ಅದೇ ಕಡೆ ದಾರಿ ಅನ್ನೋ ಹಾಗೆ ಬರೀಬೇಡ”.

ಉಮಾಳ ಮನಸ್ಸು ತಿಳಿಯಾಗಿತ್ತು. ” ಐ ಆಮ್ ಸಾರಿ ಜಯ್. ಕತೆಗೆ ಒಳ್ಳೆ ಕೊನೆ ಕೊಡ್ಬೇಕು ಅನ್ನೊ ಯೊಚನೆಯಲ್ಲಿ ಲೇಖಕಿಯಾಗಿ ನನ್ನ ಜವಾಬ್ದಾರಿ ಮರೆತಿದ್ದೆ. ಏನೇನೋ ಹೇಳಿ, ನಿಮ್ಮ ಮನಸ್ಸು ಕೂಡ ನೋಯಿಸ್ಬಿಟ್ಟೆ. ಹಾಗೆ ನೋಡೀದ್ರೆ, ನಿಮ್ಮ ಅಭಿಪ್ರಾಯನೇ ಸರಿ ಅನ್ನಿಸ್ತಿದೆ. ಕತೆನ ಕಳ್ಸೊದಿಕ್ಕೆ, ನಾಳೇನೇ ಕೊನೆ ದಿನ. ನಾನು ಬರೆದು ಮುಗಿಸ್ತೀನಿ. ನೀವು ಮಲಕ್ಕೊಳಿ.”

ಮಧ್ಯ ರಾತ್ರಿ ಮೀರಿತ್ತು. ಚಳಿ ಕೊರೆಯುತ್ತಿತ್ತು. ಲೇಖಕಿ ಉಮ ಜಯವಂತ್ ಮನೆ ಬೆಡ್ ರೂಮ್ ದೀಪ ರಾತ್ರಿಯೆಲ್ಲ ಉರಿಯುತ್ತಿತ್ತು. ಕತೆಗೊಂದು ಕೊನೆ ಸಿಕ್ಕಿತ್ತು.

10 Responses to ನಿರ್ಧಾರ

  1. NANDINI

    Felt nice..read this story in office ..hope more good stories will come on this website

  2. Shwetha

    curious story

  3. sowmya

    Nice. but finishing not good.

  4. Prakash.B

    wow….i think this story is around 10pages but you were finished in 2pages… very good story.

  5. Ravindra

    Very Nice story

  6. raveesh

    nice bt what about
    end

  7. suma

    nice story

  8. Girish

    Nice..durantha kathe ankondidde. But simply finishing.

  9. kumudhini lokesh

    wow gud ..different type of story…

  10. bindu

    wow very intresting story but in the ending stage i’m disappointed

Leave a Reply